ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದ ನಂ.1 ಸಹಕಾರಿ ಬ್ಯಾಂಕಾಗಿ ಗುರುತಿಸಿಕೊಳ್ಳುವಂತೆ ಮಾಡಿದ ತ್ರಪ್ತಿ ನನಗಿದೆ: ರಮೇಶ ಕತ್ತಿ

ಸ್ಥಳೀಯ ವಿಶ್ವರಾಜ ಸಭಾಭವನದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ನಿಮಿತ್ಯ ಕರೆದ ತಾಲೂಕಿನ ಪಿಕೆಪಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿದರು. ಎ.ಬಿ.ಪಾಟೀಲ, ಮಹಾವೀರ ನಿಲಜಗಿ, ಆರ್.ಬಿ.ಪಾಟೀಲ, ಗಜಾನನ ಕೊಳ್ಳಿ, ಬಿ.ಎಸ್.ಸುಲ್ತಾಪೂರಿ ಇತರರಿದ್ದರು.

ಹುಕ್ಕೇರಿ: ಮುಳುಗುವ ಭೀತಿಯಲ್ಲಿದ್ದ ಡಿಸಿಸಿ ಬ್ಯಾಂಕಿಗೆ 80 ರ ದಶಕದಲ್ಲಿ ಜಿಲ್ಲೆಯ ಹಿರಿಯರು ಅದರ ಅಧ್ಯಕ್ಷನನ್ನಾಗಿ ಮಾಡಿದರು. ಅವರ ವಿಶ್ವಾಸಕ್ಕೆ ಚ್ಯುತಿ ಬರದಂತೆ 30 ವರ್ಷ ಆಡಳಿತ ನಡೆಸಿ ರಾಜ್ಯದ ನಂ.1 ಬ್ಯಾಂಕ್ ಆಗಿ ಗುರುತಿಸುವಂತೆ ಮಾಡಿದ ಹೆಮ್ಮೆ ನನಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

  ಸೋಮವಾರ ಸ್ಥಳೀಯ ವಿಶ್ವರಾಜ ಸಭಾಭವನದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ನಿಮಿತ್ಯ ಕರೆದ ತಾಲೂಕಿನ ಪಿಕೆಪಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಲಕ್ಷಾಂತರ ರೈತರಿಗೆ ಸಾವಿರಾರು ಕೋಟಿ ರೂ ಸಾಲಮನ್ನಾ ಭಾಗ್ಯ ದೊರಕಲು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ನಾನು ಅಧಿಕಾರ ವಹಿಸಿಕೊಂಡಾದ 544 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದ್ದ ಡಿಸಿಸಿ ಬ್ಯಾಂಕಿನ ಅಧಿಕಾರ ಬಿಡುವ ಮುನ್ನ 6 ಸಾವಿರ ಕೋಟಿ ರೂ ಹೆಚ್ಚಿನ ಆರ್ಥಿಕ ಕ್ಷಮತೆ ಕಲ್ಪಿಸಿದ್ದೇನೆ. ಇದಕ್ಕೆ ಜಿಲ್ಲೆಯ ಎಲ್ಲ ಸಹಕಾರಿಗಳ ಮತ್ತು ರೈತರ ಸಹಕಾರವೇ ಕಾರಣವೆಂದರು. ಬ್ಯಾಂಕ್ ಉಳಿಸಿ ಬೆಳೆಸಲು ನಾನು ಕೆಲವೊಂದು ಕಠಿಣ ಕ್ರಮ ತೆಗೆದುಕೊಂಡಿದ್ದೇನೆ. ಆದರೆ ಅದನ್ನೆ ದೊಡ್ಡ ವಿಷಯವನ್ನಾಗಿ ಮಾಡಿ ಅಪಪ್ರಚಾರ ಮಾಡುತ್ತಿರುವುದು ವಿಷಾದಕರವೆಂದರು.

  ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಾರಂಭವಾಗಿದ್ದು ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಜನರಿಗೆ ನಾನು ಸಹಕಾರಿ ಸಂಘ ಸಂಸ್ಥೆಗಳನ್ನು ಉಳಿಸಿ ಬೆಳೆಸಿದ್ದು ಗೊತ್ತಿದೆ. ತಾಲೂಕಿನ ಜನರಿಗೆ ಸುಳ್ಳು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಂದ ಜನರ ಆರೋಪ, ಕುತಂತ್ರ ಮತ್ತು ಆಮಿಷಗಳು ಗೊತ್ತಾಗುತ್ತಿವೆ. ಇಲ್ಲಿಯ ಜನರ ರಕ್ತದ ಕಣ ಕಣದಲ್ಲೂ ಸಹಕಾರ ಮತ್ತು ಸ್ವಾಭಿಮಾನ ತುಂಬಿಕೊಂಡಿದೆ. ಆರೋಪಿಸುವವರಿಗೆ ತಾಲೂಕಿನ ಜನರೇ ಉತ್ತರಿಸುತ್ತಾರೆ ಎಂದರು.

         ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ ರಾಜಕೀಯವಾಗಿ ನಾನು ಮತ್ತು ಕತ್ತಿ ಕುಟುಂಬ ವಿರೋಧಿಗಳಾದರೂ ಸಹಕಾರಿ ಕ್ಷೇತ್ರದಲ್ಲಿ ಹೊಂದಾಣಿಕೆ ಮೂಲಕ ಸಹಕಾರ ಕ್ಷೇತ್ರ ಉಳಿಸಿ ಬೆಳೆಸಿದ್ದೇವೆ. ಅಪ್ಪಣ್ಣಗೌಡರ ಹೆಸರು ಬಳಸಿಕೊಂಡು ಚುನಾವಣೆ ಮಾಡಲು ಮುಂದಾಗಿರುವ ವಿರೋಧಿಗಳಿಗೆ ನಾನು ಮತ್ತು ಕತ್ತಿ ಸಹೋದರರು ಅಪ್ಪಣ್ಣಗೌಡರ ಗರಡಿ ಮನೆಯಲ್ಲಿ ಸಹಕಾರಿ ಪಾಠ ಕಲಿತಿದ್ದು ಗೊತ್ತಿಲ್ಲವೆಂದರು. ರಾಜಕೀಯ ಲಾಭಕ್ಕಾಗಿ ಹೋರಾಡುತ್ತಿರುವವರ ವಿರುದ್ಧ ತಾಲೂಕಿನ ಸ್ವಾಭಿಮಾನಿ ಸಹಕಾರಿ ಜನರಳ ಉತ್ತರ ಚುನಾವಣೆ ಫಲಿತಾಂಶ ಬಂದ ಬಳಿಕ ಗೊತ್ತಾಗುತ್ತದೆ ಎಂದರು.

    ತಾಲೂಕಿನ 92 ಪಿಕೆಪಿಎಸ್‌ಗಳ ಪೈಕಿ ಸಭೆಯಲ್ಲಿ 80 ರಷ್ಟು ಸಂಸ್ಥೆಗಳ ಪದಾಧಿಕಾರಿಗಳಿದ್ದರು. ತಾಲೂಕಿನ ಸಹಕಾರಿ ಮುಖಂಡರು ಮಾತನಾಡಿ ವಿದ್ಯುತ್ ಸಹಕಾರಿ ಸಂಘ ಉಳಿಸಲು ಜೋಡೆತ್ತುಗಳು ಕೂಡಿಕೊಂಡಿದ್ದು ಹರ್ಷ ತಂದಿದೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂಬ ಅಭಿಮತ ವ್ಯಕ್ತಪಡಿಸಿದರು.

         ಪೃಥ್ವಿ ಕತ್ತಿ, ಪವನ ಕತ್ತಿ, ಮಹಾವೀರ ನಿಲಜಗಿ, ಬಾಬು ಪೂಜೇರಿ, ಆರ್. ಬಿ. ಪಾಟೀಲ, ಸುನೀಲ ಪರ್ವತರಾವ, ರೋಹನ ನೇಸರಿ, ಗಜಾನನ ಕೊಳ್ಳಿ, ಬಿ.ಎಸ್.ಸುಲ್ತಾನಪೂರ, ನಂದು ಮುಡಶಿ, ರಾಚಯ್ಯಾ ಹಿರೇಮಠ, ಮಹಾನಿಂಗ ಸನದಿ, ಅಶೋಕ ಪಾಟೀಲ, ಶೀತಲ ಬ್ಯಾಳಿ, ಗುರುರಾಜ ಕುಲಕರ್ಣಿ, ಸುನೀಲ ನೇರ್ಲಿ, ಪ್ರಶಾಂತ ಪಾಟೀಲ, ತಮ್ಮಣ್ಣಾ ಕರಗುಪ್ಪಿ, ರಾಯಪ್ಪಾ ಡೂಗ, ಕಲಗೌಡ ಪಾಟೀಲ, ಅರ್ಜುನ ಯಲ್ಲನಾಯ್ಕ ಪಾಟೀಲ, ಎ.ಕೆ.ಪಾಟೀಲ, ದುಂಡನಗೌಡ ಪಾಟೀಲ, ಕೆಂಪಣ್ಣಾ ದೇಸಾಯಿ, ಶ್ರೀಶೈಲ ಮಠಪತಿ ಮತ್ತಿತರರಿದ್ದರು. ಎಸ್.ಆರ್.ಕರ್ಕಿನಾಯಿಕ ಸ್ವಾಗತಿಸಿ, ನಿರೂಪಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept