ಹಳೆ ತಹಶೀಲ್ದಾರ ಕಚೇರಿಯ ದಾಖಲೆಗಳ ಸಂಗ್ರಹಣಾ ವಿಭಾಗದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ ಮತ್ತು ಜಿಲ್ಲಾಧಿಕಾರಿ ಮಹಮ್ಮದ ರೋಶನ್ ಕಡತಗಳನ್ನು ಪರಿಶೀಲಿಸುತ್ತಿರುವುದು.
ಹುಕ್ಕೇರಿ: ರಾಜ್ಯ ಸರಕಾರ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವು ಸರಿಯಾಗಿ ಸಾರ್ವಜನಿಕರಿಗೆ ತಲುಪುತ್ತಿವೆ ಎಂಬುದನ್ನು ಪರಿಶೀಲಿಸಲು ಹುಕ್ಕೇರಿ ತಹಸೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿದ್ದಾಗಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ ಹೇಳಿದರು.
ಸೋಮವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಕಡತ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ಆರ್.ಟಿ.ಸಿ. ದಾಖಲಾತಿಯಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ಬಗ್ಗೆ, ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಕೋರ್ಟನಲ್ಲಿ ಇರುವುದು ಸೇರಿದಂತೆ ವಿವಿಧ ಪ್ರಕಾರದ ವಾಸ್ತವಿಕ ಸಮಸ್ಯೆಗಳನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡರು. ಜಿಲ್ಲಾಧಿಕಾರಿ ಮಹಮ್ಮದ ರೋಶನ್ ಮತ್ತು ತಹಸೀಲ್ದಾರ ಮಂಜುಳಾ ನಾಯಕ ಪೂರಕ ಮಾಹಿತಿ ನೀಡಿದರು.
ನಂತರ ಭೂ ದಾಖಲೆ ರೂಮಿಗೆ ಭೇಟಿ ನೀಡಿದ ಪ್ರಧಾನ ಕಾರ್ಯದರ್ಶಿಗಳು, ಕೈಯಿಂದ ಬರೆದ ಹಳೆಯ ಭೂದಾಖಲೆಗಳನ್ನು ಪರಿಶೀಲಿಸಿದರು. ಕಾಳಜಿಯಿಂದ ಭೂದಾಖಲೆ ಸಂರಕ್ಷಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಬಟ್ಟೆಯಲ್ಲಿ ಕಟ್ಟಿ ಇಟ್ಟ ದಾಖಲೆ ಪರಿಶೀಲಿಸಿದ ಬಳಿಕ ಕಂಪ್ಯೂಟರ್ ವಿಭಾಗಕ್ಕೆ ಹೋಗಿ ದಾಖಲಾತಿ ಕುರಿತು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಮಹಮ್ಮದ್ ರೋಶನ್, ಬೆಳಗಾವಿ ಎಸಿ ಶ್ರವಣಕುಮಾರ ನಾಯಕ, ತಹಶೀಲ್ದಾರ ಮಂಜುಳಾ ನಾಯಕ, ಗ್ರೇಡ್ 2 ತಹಶೀಲ್ದಾರ್ ಪ್ರಕಾಶ ಕಲ್ಲೋಳಿ, ಉಪ ತಹಶೀಲ್ದಾರ ನಾಗೇಂದ್ರ ಪಾಟೀಲ, ಗ್ರಾಮ ಅಭಿವೃದ್ಧಿ ಅಧಿಕಾರಿ ನಾಗನಗೌಡ ಪಾಟೀಲ ಮತ್ತಿತರರಿದ್ದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಈ ಮೊದಲು ಬೆಳಗಾವಿ ಜಿಲ್ಲಾ ಪಂಚಾಯತಿ ಸಿ.ಇ.ಒ ಆಗಿ ಕಾರ್ಯ ನಿರ್ವಹಿಸಿದ್ದು ಸ್ಮರಣೀಯ





