ಸ್ಥಳೀಯ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಪ್ರವಾಹ ನಿರ್ವಹಣೆ ಸಭೆಯಲ್ಲಿ ತಾಲ್ಲೂಕು ಮಟ್ಟದ ಅನುಷ್ಟಾನ ಅಧಿಕಾರಿಗಳ, ಪಿಡಿಒ ಮತ್ತು ನೋಡಲ್ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯ್ಕ ಮಾತನಾಡಿದರು.ಮಂಜುಳಾ ನಾಯಕ, ಪ್ರಭಾವತಿ ಪಾಟೀಲ, ಡಾ.ಉದಯ ಕುಡಚಿ, ವಿನಾಯಕ ಪೂಜಾರ ಇತರರಿದ್ದರು.
ಹುಕ್ಕೇರಿ:ಮಳೆಗಾಲ ಪ್ರಾರಂಭವಾಗಿದ್ದು ಎಡ ಬಿಡದೇ ಸುರಿಯುತ್ತಿರುವ ಮಳೆಯಿಂದ ಹಳ್ಳ ಕೊಳ್ಳ ಮತ್ತು ನದಿಗಳು ತುಂಬಿ ಹರಿಯುತ್ತಿವೆ.ಇಂತಹ ಸಂದರ್ಭದಲ್ಲಿ ಪ್ರವಾಹ ಅಥವಾ ಅತಿವೃಷ್ಟಿಯಿಂದ ಅನಾಹುತ ಸಂಭವಿಸಿದಲ್ಲಿ ತಕ್ಷಣ ತಾಲೂಕಾಡಳಿತಕ್ಕೆ ತಿಳಿಸುವುದರ ಜತೆಗೆ ಸಂತ್ರಸ್ಥರ ನೆರವಿಗೆ ಧಾವಿಸಬೇಕೆಂದು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯ್ಕ ಹೇಳಿದರು.
ಮಂಗಳವಾರದಂದು ಸಂಜೆ ಸ್ಥಳೀಯ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಪ್ರವಾಹ ನಿರ್ವಹಣೆ ಸಭೆಯಲ್ಲಿ ತಾಲ್ಲೂಕು ಮಟ್ಟದ ಅನುಷ್ಟಾನ ಅಧಿಕಾರಿಗಳ, ಪಿಡಿಒ ಮತ್ತು ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪ್ರವಾಹ ಸಮಯದಲ್ಲಿ ಪಿಡಿಒಗಳು ಮತ್ತು ನೋಡಲ್ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಬಾರದು. ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಹುಡುಕಿ, ವಾಸಿಸುವವರಿಗೆ ತಿಳಿವಳಿಕೆ ಹೇಳಿ, ಅಲ್ಲಿರುವವರನ್ನು ಎತ್ತರದ ನೀರಿನಿಂದ ರಕ್ಷಿಸುವಂತಹ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕೆಂದರು. ಸಂತ್ರಸ್ಥರಿಗೆ ಕಾಳಜಿ ಕೇಂದ್ರ ತೆರೆಯಬೇಕು ಎಂದು ತಿಳಿಸಿದರು.ಮಳೆಗಾಲದಲ್ಲಿ ಜನರಿಗೆ ಕುಡಿಯಲು ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಂಡು, ಶುದ್ಧ ಕುಡಿಯುವ ನೀರು ಒದಗಿಸಲು ಗಮನಿಸಬೇಕೆಂದರು.
ಜೋರಾದ ಗಾಳಿಗೆ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಯಿದ್ದು, ಜತೆಗೆ ವಿದ್ಯುತ್ ಪ್ರವಹಿಸುವ ತಂತಿ ಹರಿದು ಬಿದ್ದು ಜನರ ಜೀವಕ್ಕೆ ಅಪಾಯವಾಗುವುದು. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸಲು ಸೂಚಿಸಿದರು. ಮಳೆಯಿಂದ ಸೇತುವೆಗಳು ಮುಳುಗಿ ಜನರಿಗೆ ತೊಂದರೆಯಾದಾಗ, ಪರ್ಯಾಯ ಮಾರ್ಗದ ಮೂಲಕ ಸ್ಥಳಾಂತರ ಮಾಡಲು ಸಲಹೆ ನೀಡಿದರು.
ತಹಶೀಲ್ದಾರ್ ಮಂಜುಳಾ ನಾಯಕ, ತಾಲ್ಲೂಕು ಪಂಚಾಯ್ತಿ ಇಒ ಟಿ.ಆರ್.ಮಲ್ಲಾಡದ, ಬಿಇಒ ಪ್ರಭಾವತಿ ಪಾಟೀಲ್, ವಿದ್ಯುತ್ ಸಹಕಾರಿ ಸಂಘದ ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೆಮಲಾಪುರೆ, ತಾಲೂಕು ವೈದ್ಯಾಧಿಕಾರಿ ಡಾ.ಉದಯ ಕುಡಚಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಆರ್.ಕಳ್ಳಿಮನಿ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ವಿನಾಯಕ ಪೂಜಾರಿ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರೆ, ಮತ್ತಿತರರಿದ್ದರು. ಉಪ ತಹಶೀಲ್ದಾರ್ ಅನಿತಾ ಏಶಿ ಸ್ವಾಗತಿಸಿ, ವಂದಿಸಿದರು.





