ಹುಕ್ಕೇರಿ ಹೊರವಲಯದ ಭಾಪೂಜಿ ಪಿ.ಯು ಕಾಲೇಜಿನಲ್ಲಿ ನಡೆದ “ಭಾಪೂಜಿ ಜ್ಞಾನಜ್ಯೋತಿ” ಮತ್ತು ಸ್ಪರ್ಧಾತ್ಮಕ ತರಬೇತಿ ನೀಡುವ ಒಪ್ಪಂದ ಕಾರ್ಯಕ್ರಮವನ್ನು ಆನಂದ ಮಹಾಸ್ವಾಮಿಗಳು ಉದ್ಘಾಟಿಸಿದರು. ಸಂಜಯ ನವಲಗುಂದ, ಎಂ.ಎನ್.ಉಪ್ಪಾರ, ಡಾ.ಗುರುತೇಜ, ಪ್ರಶಾಂತ ಕಟಾಂಬಳೆ ಇತರರಿದ್ದರು.
ಹುಕ್ಕೇರಿ : ಹುಕ್ಕೇರಿ ಹೊರವಲಯದ ಎಲಿಮುನ್ನೋಳಿ ಕ್ರಾಸ ಬಳಿ ಇರುವ ಭಾಪೂಜಿ ಸ್ವತಂತ್ರ ಸಂಯೋಜಿತ ವಸತಿ ಪಿ.ಯು ಕಾಲೇಜಿನೊಂದಿಗೆ ಮಂಗಳೂರಿನ ವಿಜಿಡಮ್ ಫೌಂಡೇಶನ್ನವರು ಸೇರಿಕೊಂಡು ಈ ಭಾಗದ ಮಕ್ಕಳನ್ನು ಸ್ಪರ್ಧಾತ್ಮಕವಾಗಿ ರೂಪಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವೆಂದು ಕುರಣಿ ಗಂಗಾದೇವಿ ಮಠದ ಆನಂದ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ಹುಕ್ಕೇರಿ ಹೊರವಲಯದ ಭಾಪೂಜಿ ಪಿ.ಯು ಕಾಲೇಜಿನಲ್ಲಿ ನಡೆದ “ಭಾಪೂಜಿ ಜ್ಞಾನಜ್ಯೋತಿ” ಮತ್ತು ಸ್ಪರ್ಧಾತ್ಮಕ ತರಬೇತಿ ನೀಡುವ ಒಪ್ಪಂದ ಪತ್ರದ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ನಮ್ಮ ಭಾಗದ ಪಾಲಕರಲ್ಲಿ ಮಂಗಳೂರು, ಉಡುಪಿ ಕಾಲೇಜಿನಲ್ಲಿ ಹೆಚ್ಚಿನ ಶುಲ್ಕ ಭರಿಸಿಯಾದರೂ ಓದಿಸಬೇಕು ಎಂಬ ಮನೋಭಾವ ಮೂಡಿದೆ. ಅದರಿಂದ ಆ ಭಾಗದಲ್ಲಿ ನೀಡುವ ಕಲಿಕೆಯನ್ನು ಈ ಭಾಗದಲ್ಲೂ ಕಲ್ಪಿಸಬೇಕೆಂದು ಮಕ್ಕಳಿಗೆ ಶುಲ್ಕದ ಹೊರೆಯಾಗದಂತೆ ಅಲ್ಲಿನ ಪ್ರತಿಷ್ಟಿತ ಕೋಚಿಂಗ್ದವರನ್ನು ಇಲ್ಲಿಗೆ ಕರೆಸಿ ಅದೇ ರೀತಿಯ ಸ್ಪರ್ಧಾತ್ಮಕ ತರಬೇತು ನೀಡಲು ಮುಂದಾಗಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆಯುತ್ತಾರೆಂಬ ಭರವಸೆ ವ್ಯಕ್ತಪಡಿಸಿದರು.
ಮಮದಾಪೂರದ ಚರಂತೇಶ್ವರ ಮಠದ ಡಾ.ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿ ಮಾತನಾಡುತ್ತಾ ನಾವು ಗಳಿಸಿದ ಆಸ್ತಿ, ಸಂಪತ್ತಿಗಿಂತ ಹೆಚ್ಚಾದ ಬೆಲೆ ವಿದ್ಯೆಗೆ ಇದೆ.ಅದನ್ನು ಪಡೆಯಲು ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸುವ ಛಲ ಇರಬೇಕೆಂದರು.
ವಿಜಿಡಮ್ ಫೌಂಡೇಶನ್ನ ಸಹ ಸಂಸ್ಥಾಪಕ ಡಾ.ಗುರುತೇಜ ಮಾತನಾಡಿ ಸ್ಪರ್ಧಾತ್ಮಕ ತರಬೇತಿ ನೀಡುವ ಒಪ್ಪಂದ ಜಿಲ್ಲೆಯಲ್ಲಿ ಈ ಭಾಪೂಜಿ ಶಿಕ್ಷಣ ಸಂಸ್ಥೆಯೊಂದಿಗೆ ಮಾತ್ರ ಮಾಡಿಕೊಂಡಿದ್ದೇವೆ. ಆಯ್.ಎ.ಎಂ, ಆಯ್.ಆಯ್.ಟಿ, ನೀಟ್, ಸಿ.ಇ.ಟಿ ಎನ್.ಡಿ.ಎ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಂಗಳೂರಿನ ಪರಿಣಿತರು ಇಲ್ಲಿಗೇ ಆಗಮಿಸಿ ಶನಿವಾರ ಮತ್ತು ರವಿವಾರ ನೀಡುತ್ತಾರೆ.ಮುಂಬರುವ ವರ್ಷದಲ್ಲಿ ಇಲ್ಲಿನ ಮಕ್ಕಳಲ್ಲಿ ಕೆಲವರಾದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಪಡೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಜಯಕುಮಾರ ನವಲಗುಂದ ಮಾತನಾಡಿ ನಮ್ಮ ಕಾಲೇಜಿನ ಮಕ್ಕಳಿಗೆ ಯಾವುದೇ ಹೆಚ್ಚಿನ ಶುಲ್ಕ ಪಡೆಯದೇ ಈ ತರಬೇತಿ ನೀಡುತ್ತಿದ್ದೇವೆ.ಕಾರಣ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು ನಮ್ಮ ಶ್ರಮಕ್ಕೆ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕ ಪ್ರಶಾಂತ ಕಟಾಂಬಳೆ, ಸಿಇಒ ಎಂ.ಎನ್.ಉಪ್ಪಾರ, ಆಡಳಿತಾಧಿಕಾರಿಗಳಾದ ಬಸವರಾಜ ಅಮ್ಮಣಗಿ, ಅರ್ಜುನ ಸಣ್ಣಕ್ಕಿನವರ, ಮಲ್ಲಿಕಾರ್ಜುನ ಚೌಗಲಾ, ಉಪನ್ಯಾಸಕ ರಮೇಶ ಡಬ್ಬು, ಮಂಗಳೂರಿನ ಕೌಶಿಕಗೌಡ, ರತೀಶ ಬಿ.ಎನ್ ಇತರರಿದ್ದರು. ಉಪನ್ಯಾಸಕರಾದ ಮಾನಸಿ ಪ್ರಾರ್ಥಿಸಿದರು. ಸುರೇಖಾ ಖಾನಾಪೂರೆ ಸ್ವಾಗತಿಸಿದರು. ಅಕ್ಷತಾ ನಿರೂಪಿಸಿದರು. ಬಸವರಾಜ ಅಮ್ಮಣಗಿ ವಂದಿಸಿದರು.





