ಬಸವ ಜಯಂತಿ ನಿಮಿತ್ಯ ಪ್ಲ್ಯಾಸ್ಟಿಕ ಬುಟ್ಟಿ ಮತ್ತು ಬಡವರಿಗೆ ಆಹಾರ ಧಾನ್ಯಗಳನ್ನು ಶಾಸಕ ನಿಖಿಲ ಕತ್ತಿ ವಿತರಿಸಿದರು. ಚಂದ್ರಶೇಖರ ಶಿವಾಚಾರ್ಯರು, ಅಭಿನವ ಮಂಜುನಾಥ ಶ್ರೀಗಳು, ವಿಜಯ ರವದಿ. ಎ.ಕೆ.ಪಾಟೀಲ, ಇಮ್ರಾನ ಮೋಮಿನ ಇತರರಿದ್ದರು.
ಹುಕ್ಕೇರಿ : ಬಸವ ಜಯಂತಿಯನ್ನು ತಾಲೂಕಾಡಳಿತ ನಿರ್ಲಕ್ಷಿಸಿದ್ದು ಲಿಂಗಾಯತ ಜನರ ಭಾವನೆ ಕೆರಳಿಸಿದೆ. ಲಿಂಗಾಯತ ಮುಖಂಡರು ಇದನ್ನು ಖಂಡಿಸಿದ್ದಾರೆ. ಗೈರಾದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಚಿಂತನೆ ನಡೆದಿದೆ.
ಬುಧವಾರದಂದು ನಡೆದ ಬಸವ ಜಯಂತಿಯಲ್ಲಿ ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಅಧ್ಯಕ್ಷರು, ತಹಸೀಲ್ದಾರರು ಆಗಿರುವ ಮಂಜುಳಾ ನಾಯಕ, ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಪ್ರಮುಖವಾಗಿ ಗೈರು ಆಗಿದ್ದರಿಂದ ಇನ್ನೂಳಿದ ಇಲಾಖೆಗಳ ಮುಖ್ಯಸ್ಥರು ಬಸವ ಜಯಂತಿ ಮೆರವಣಿಗೆ ಸೇರಿದಂತೆ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಕಾಟಾಚಾರಕ್ಕೆ ಬಸವ ಜಯಂತಿಯನ್ನು ತಾಲೂಕಾಡಳಿತ ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಯೊಂದು ರಾಷ್ಟ್ರೀಯ ಹಬ್ಬಗಳಲ್ಲಿ ತಾಲೂಕಾಡಳಿತದ ಬಹುಪಾಲು ಅಧಿಕಾರಿಗಳು ಗೈರು ಹಾಜರಾಗುತ್ತಾರೆ. ರಾಷ್ಟ್ರೀಯ ಹಬ್ಬಗಳ ಪರ್ವಭಾವಿ ಸಭೆಯಲ್ಲಿ ಇದನ್ನು ಮುಖಂಡರು ಮತ್ತು ಸರ್ವಜನಿಕರು ಪ್ರಶ್ನಿಸಿದಾಗ ಅಧಿಕಾರಿಗಳಿಗೆ ನೋಟೀಸ್ ಕೊಟ್ಟು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ತಹಸೀಲ್ದಾರರು ಸಮಜಾಯಿಸುತ್ತಾರೆ.
ಜಗತ್ತೇ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವಾಗ ಹುಕ್ಕೇರಿಯಲ್ಲಿ ತಾಲೂಕಾಡಳಿತದ ಮುಖ್ಯಸ್ಥರಾದ ತಹಸೀಲ್ದಾರ ಮತ್ತು ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಶಾಸಕ ನಿಖಿಲ ಕತ್ತಿ ಅವರು ಬಸವೇಶ್ವರ ಭಾವಚಿತ್ರಕ್ಕೆ ಮತ್ತು ಬಸವಣ್ಣಗಳ(ಎತ್ತುಗಳ) ಮೆರವಣಿಗೆಗೆ ಚಾಲನೆ ನೀಡಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ತಾಲೂಕಾಡಳಿತದ ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರದ ಮೂಲಕ ಮನವಿಸಿಕೊಳ್ಳುತ್ತೇನೆ. ಆದಷ್ಟು ಬೇಗ ತಾಲೂಕಾಡಳಿತದ ಅಧಿಕಾರಿಗಳ ಸಭೆ ಕರೆದು ಬಸವ ಜಯಂತಿಯ ಲೋಪ ಹಾಗೂ ಕೆಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸದೇ ಎಲ್ಲಿಂದಲೋ ಬಂದು ಹೋಗುವ ಪರಿಪಾಠ ಪ್ರಶ್ನಿಸುತ್ತೇನೆ ಎಂದರು. ಇಂದಿನ ಘಟನೆ ಸಮಾಜದ ಜತೆಗೆ ನನಗೂ ಬೇಸರ ತರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಅಭಿನವ ಮಂಜುನಾಥ ಶ್ರೀಗಳು, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ, ಗ್ರೇಡ್ 2 ತಹಸೀಲ್ದಾರ ಪ್ರಕಾಶ ಕಲ್ಲೋಳಿ, ಸಿಡಿಪಿಒ ಹೊಳೆಪ್ಪಾ ಎಚ್, ಸಿಪಿಐ ಮಹಾಂತೇಶ ಬಸ್ಸಾಪೂರ ಹಾಗೂ ಮುಖಂಡರಾದ ವಿಜಯ ರವದಿ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಚಂದ್ರಶೇಖರ ಗಂಗಣ್ಣವರ, ತಮ್ಮಣ್ಣಗೌಡ ಪಾಟೀಲ, ಚಂದ್ರಶೇಖರ ಗಂಗನ್ನವರ, ಶಂಕರ ನಾಯಿಕ, ಕಬೀರ ಮಲೀಕ್, ಬಸವರಾಜ ಪಾಟೀಲ, ಶಂಕರ ಅಲಗರಾವುತ ಮತ್ತಿತರರಿದ್ದರು.
ಬಸವ ಜಯಂತಿ ಆಚರಣೆಗೆ ಆಗಮಿಸದ ಅಧಿಕಾರಿಗಳನ್ನು ಜಗಜ್ಯೋತಿ ಬಸವೇಶ್ವರ ಎಂದಿಗೂ ಕ್ಷಮಿಸುವುದಿಲ್ಲ.ಇನ್ನಾದರೂ ಇಂತಹವರಿಗೆ ಭಗವಂತ ಒಳ್ಳೆಯ ಬುದ್ದಿ ನೀಡಲಿ. ನಿಖಿಲ ಕತ್ತಿ ಶಾಸಕರು