ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿ ಕರ್ನಲ್ ಸೋಫಿಯಾ ಕುರೇಶಿ ಅವರ ಮಾವ ಮತ್ತು ಅತ್ತೆಗೆ ಹುಕ್ಕೇರಿ ಮತ್ತು ಕೊಣ್ಣೂರ ಶ್ರೀಗಳಿಂದ ಸತ್ಕಾರ.
ಹುಕ್ಕೇರಿ: ಸೊಸೆ ಬಂದು ಮನೆ ಬೆಳಗಬೇಕು ಎನ್ನುವ ಸಂಪ್ರದಾಯ ನಮ್ಮ ದೇಶದಲ್ಲಿ ಇದೆ. ಆದರೆ ನನ್ನ ಸೊಸೆ ಬಂದು ಇಡೀ ದೇಶವನ್ನೇ ಬೆಳಗಿದಳು ಎನ್ನುವುದಕ್ಕೆ ಕರ್ನಲ್ ಸೋಫಿಯಾ ಕುರೇಶಿ ನಿದರ್ಶನ ಆಗಿದ್ದಾಳೆ. ಅವಳು ನಮ್ಮ ಸೊಸೆ ಎನ್ನುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ ಎಂದು ಕರ್ನಲ್ ಸೋಫಿಯಾ ಕುರೇಶಿ ಮಾವ ಗೌಸಸಾಬ್ ಬಾಗೇವಾಡಿ ಹೇಳಿದರು.

ಶನಿವಾರ ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೊಣ್ಣೂರ ಮರಡಿಮಠದ ಡಾ. ಪವಾಡೇಶ್ವರ ಸ್ವಾಮೀಜಿಯವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಜಾತಿಯಲ್ಲಿ ಮುಸ್ಲಿಮ್ ಇರಬಹುದು. ಆದರೆ ನಾನು ಮಠದ ಪರಿಸರದಲ್ಲಿ ಬೆಳೆದವನು. ನನಗೆ ಮಕ್ಕಳಾಗದ ಸಂದರ್ಭದಲ್ಲಿ ತವಗದ ಬಾಳಯ್ಯ ಅಜ್ಜನವರ ಆಶೀರ್ವಾದದಿಂದ ನನಗೆ ಮಕ್ಕಳಾದರು. ಅದೇ ಮಗ ಈಗ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ಆತನ ಪತ್ನಿಯೇ ಸೋಫಿಯಾ ಎಂದರು. ಜಾತಿ ಧರ್ಮಕ್ಕಿಂತ ನಮ್ಮ ನಾಡು ನುಡಿ ಮತ್ತು ದೇಶಕ್ಕೆ ಎಲ್ಲರೂ ಪ್ರಥಮ ಆದ್ಯತೆ ನೀಡಬೇಕೆಂದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಮ್ಮ ಜಿಲ್ಲೆಯ ಸೊಸೆ ಭಾರತೀಯ ಸೇನೆಯಲ್ಲಿ ಉನ್ನತ ಸ್ಥಾನದಲ್ಲಿದ್ದು ಪಾಕಿಸ್ತಾನದ ಜೊತೆಗೆ ನಡೆಯುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪ್ರಮುಖ ಸ್ಥಾನ ವಹಿಸಿದ್ದು ನಮಗೆಲ್ಲ ಸಂತಸ ಮತ್ತು ಹೆಮ್ಮೆಯ ಸಂಗತಿ ಎಂದರು.ಇದರ ಜತೆಗೆ ನಮ್ಮ ಯೋಧರಿಗೆ ಪ್ರೀತಿ ವಿಶ್ವಾಸದ ಭರವಸೆ ಹಾಗೂ ನೈತಿಕ ಸ್ಥೈರ್ಯದ ಶಕ್ತಿ ತುಂಬೋಣ ಎಂದರು.
ಕೊಣ್ಣೂರ ಮರಡಿಮಠದ ಡಾ. ಪವಾಡೇಶ್ವರ ಸ್ವಾಮೀಜಿ ಮಾತನಾಡಿ, ಇವತ್ತು ಹುಕ್ಕೇರಿ ಶ್ರೀಗಳು ಕೊಣ್ಣೂರ ಮರಡಿಮಠದವರೆಗೂ ಬಂದು ದೇಶ ಭಕ್ತ ಕುಟುಂಬಕ್ಕೆ ಸನ್ಮಾನಿಸಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದರು.
ವಿಜಯವಾಣಿ ಚಿತ್ರ: 10ಎಚ್.ಯು.ಕೆ1: ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿ ಕರ್ನಲ್ ಸೋಫಿಯಾ ಕುರೇಶಿ ಅವರ ಮಾವ ಮತ್ತು ಅತ್ತೆಗೆ ಹುಕ್ಕೇರಿ ಮತ್ತು ಕೊಣ್ಣೂರ ಶ್ರೀಗಳಿಂದ ಸತ್ಕಾರ.