ಜಮಖಂಡಿ ನಗರದ ಓಲೇಮಠದ ಆಶ್ರಯದಲ್ಲಿ ಹಮ್ಮಿಕೊಂಡಿರುವ ವಚನ ಜಾತ್ರಾ ಮಹೋತ್ಸವವನ್ನು ಮಾಜಿ ಸೈನಿಕ ರಾಮು ಶಿರೋಳ ಉದ್ಘಾಟಿಸಿದರು. ಶಾಸಕ ಜಗದೀಶ ಗುಡಗುಂಟಿ, ಶ್ರೀಕಾಂತ ಕುಲಕರ್ಣಿ, ಜಿ.ಎಸ್. ನ್ಯಾಮಗೌಡ, ಹರ್ಷಾನಂದ ಶ್ರೀಗಳು, ಆನಂದ ದೇವರು ಮತ್ತಿತರರು ಇದ್ದಾರೆ
ಜಮಖಂಡಿ: ನಿಸರ್ಗದಲ್ಲಿ ದೇವರಿದ್ದಾನೆ. ಆದರೆ, ಗೋಚರಿಸುವುದಿಲ್ಲ. ಹಾಲಿನಲ್ಲಿ ತುಪ್ಪವಿದ್ದರೂ ಕಾಣುವುದಿಲ್ಲ. ಹಾಲಿಗೆ ಸಂಸ್ಕಾರ ಕೊಟ್ಟಾಗ ತುಪ್ಪವಾಗುವುದು. ಹಾಗೆಯೇ ಸಂಸ್ಕಾರವಂತರಿಗೆ ದೇವರನ್ನು ಕಾಣಲು ಸಾಧ್ಯವೆಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ಯ ಏ.15 ರಿಂದ ಏ.29ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ ಮಂಗಳವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಜಮಖಂಡಿ ಆಧ್ಯಾತ್ಮಿಕ ಕ್ಷೇತ್ರದ ಕೇಂದ್ರವಾಗಿದೆ. ಜಗತ್ತಿಗೆ ಆಧ್ಯಾತ್ಮಿಕ ಸಂದೇಶಗಳು ಜಮಖಂಡಿ ಮೂಲಕ ಸಾಗುತ್ತವೆ. ಆದ್ದರಿಂದ ಇಂದಿನ ಯುವಕರಿಗೆ ಸಂಸ್ಕಾರ ಕೊಟ್ಟು ಸನ್ಮಾರ್ಗದಲ್ಲಿ ಸಾಗುವಂತೆ ಪ್ರೇರೆಪಿಸುವ ಶ್ರೀಮಠದ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು. ಮಾಜಿ ಎಂ.ಎಲ್.ಸಿ ಜಿ.ಎಸ್. ನ್ಯಾಮಗೌಡ ಮಾತನಾಡಿ, ಪುರಾತನ ಮಠವಾಗಿರುವ ಓಲೇಮಠ ಜಮಖಂಡಿ ನಗರಕ್ಕೆ ಕಳಶಪ್ರಾಯವಾಗಿದೆ ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡುತ್ತಾ ಸುಳ್ಳು ಹೇಳುವುದಿಲ್ಲ, ಯಾರೊಂದಿಗೆ ಜಗಳ ಕಾಯುವುದಿಲ್ಲ, ಯಾವುದೇ ದುಶ್ಚಟ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿ ಜೀವನವನ್ನು ಪವಿತ್ರ ಮಾಡಿಕೊಳ್ಳಬೇಕು ಎಂದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ಇಂದಿನ ಮಕ್ಕಳೇ ನಾಳಿನ ನಾಯಕರು. ಆದ್ದರಿಂದ ಇಂದಿನ ಮಕ್ಕಳಿಗೆ ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ಶಿರೋಳ ಸಮಾರಂಭವನ್ನು ಉದ್ಘಾಟಿಸಿದರು. ಹಿರಿಯ ವಕೀಲ ಡಾ.ತಾತಾಸಾಹೇಬ ಬಾಂಗಿ. ಝುಂಜರವಾಡದ ಬಸವರಾಜೇಂದ್ರ ಶರಣರು, ಗಾಣಿಗ ಸಮಾಜದ ತಾಲೂಕಾಧ್ಯಕ್ಷ ಕೆ.ಕೆ. ತುಪ್ಪದ, ಲೆಕ್ಕಪರಿಶೋಧಕ ಗಿರೀಶ ಬಾಂಗಿ ಇದ್ದರು. ನಿಖಿತಾ ಹಿರೇಮಠ, ಸಾನ್ವಿ ಬನ್ನಿಗಿಡದ ಪ್ರಾರ್ಥಿಸಿದರು. ಎಸ್.ವೈ. ಪಾಟೀಲ ಸ್ವಾಗತಿಸಿದರು. ಶಂಕರ ಲಮಾಣಿ ನಿರೂಪಿಸಿದರು. ಓಲೇಮಠದ ಆನಂದ ದೇವರು ಶರಣು ಸಮರ್ಪಿಸಿದರು.
Report by : M.N.Nadaf, Jamakhandi