ತಾಲೂಕಾ ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರಿ ಬೆಳ್ಳಿಹಬ್ಬದ ಸಮಾರಂಭವನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ನಿಡಸೋಸಿ, ಹುಕ್ಕೇರಿ ಮತ್ತು ಉ.ಖಾನಾಪೂರ ಶ್ರೀಗಳು, ಎಸ್.ಎಸ್.ಅಂಗಡಿ, ಎಸ್.ಆಯ್.ಸಂಬಾಳ, ಸಿ.ಎಂ.ದರಬಾರೆ, ಗೋವಿಂದ ಮುತಾಲಿಕ ಇತರರಿದ್ದರು.
ಹುಕ್ಕೇರಿ : ಇತರ ಇಲಾಖೆಗಳಿಂತ ಶಿಕ್ಷಣ ಇಲಾಖೆಯಲ್ಲಿ ಭಾರಿ ಭೃಷ್ಟಾಚಾರ ನಡೆಯುತ್ತಿದೆ. ಸಮಾಜ ಮತ್ತು ಸರಕಾರದ ಋಣ ತೀರಿಸಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ರವಿವಾರದಂದು ಹುಕ್ಕೇರಿ ಪಟ್ಟಣದಲ್ಲಿ ನಡೆದ ತಾಲೂಕಾ ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಬೆಳ್ಳಿಹಬ್ಬದ ಸಮಾರಂಭ ಮತ್ತು ಮೇಲಂತಸ್ತಿನ ಕಟ್ಟಡದ ಉದ್ಘಾಟನೆಯಲ್ಲಿ ಮಾತನಾಡಿದರು.ಈಗಿನ ಶಿಕ್ಷಕರಲ್ಲಿ ವೃತ್ತಿ ಮತ್ತು ಸಂಘಟನೆಯ ಕುರಿತು ಗೌರವವಿಲ್ಲ.ಎನ್.ಪಿ.ಎಸ್ ಬದಲಾಗಿ ಒ.ಪಿ.ಎಸ್ ಬೇಕು ಎಂದು ಬರುವ ಶಿಕ್ಷಕರು ಮೊದಲು ಸಂಘಟಿತರಾಗಬೇಕೆಂದರು.ಶಿಕ್ಷಕರು ಸಮಾಜಕ್ಕೆ ಮಾದರಿಯಾಗಬೇಕು.ಸರಕಾರಿ ಶಾಲೆಗಳ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಸುವಾಗ ಉಳಿದವರಿಗೆ ಅವರ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸಿ ಎಂದು ಹೇಳುವ ನೈತಿಕತೆ ಎಲ್ಲಿರುತ್ತದೆ ಎಂದು ಪ್ರಶ್ನಿಸಿದರು.

ನಿಡಸೋಸಿಯ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮತ್ತು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಪಾಠಕ್ಕಿಂತ ಬೇರೆಲ್ಲ ಕಾರ್ಯಗಳಲ್ಲಿ ತೊಡಗಿರುತ್ತಾರೆ ಎಂದರು.
ಪ್ರಾರಂಭದಲ್ಲಿ ಬೆಳ್ಳಿಹಬ್ಬದ ನೆನಪಿಗಾಗಿ ನಿರ್ಮಿಸಿದ ನೂತನ ಮೇಲಂತಸ್ತಿನ ಕಟ್ಟಡ, ವಾಣಿಜ್ಯ ಮಳಿಗೆಯ ನಾಮಫಲಕದ ಅನಾವರಣ ಜರುಗಿತು. ಈ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಎಸ್.ಆಯ್.ಸಂಬಾಳ ದಂಪತಿಗಳನ್ನು, ಅತಿಥಿಗಳನ್ನು ಸತ್ಕರಿಸಿದರು.

ವಿರಕ್ತಮಠದ ಶಿವಬಸವ ಮಹಾಸ್ವಾಮೀಜಿ, ಉಳ್ಳಾಗಡ್ಡಿ ಖಾನಾಪೂರದ ಸಿದ್ದೇಶ್ವರ ಶಿವಾಚಾರ್ಯರು, ಅಭಿನವ ಮಂಜುನಾಥ ಶ್ರೀಗಳು, ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ್, ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಬಿ.ಇ.ಒ ಪ್ರಭಾವತಿ ಪಾಟೀಲ, ಮಾಧ್ಯಮಿಕ ಶಾಲಾ ನೌಕರರ ಸಂಘ ಚಿಕ್ಕೋಡಿ ಜಿಲ್ಲಾಧ್ಯಕ್ಷ ಎಸ್.ಎಸ್.ಅಂಗಡಿ, ಸಂಘದ ಉಪಾಧ್ಯಕ್ಷ ಗೋವಿಂದ ಮುತಾಲಿಕ, ನಿರ್ದೇಶಕರು ಮತ್ತಿತರರಿದ್ದರು. ಸಹಕಾರಿ ಅಧ್ಯಕ್ಷ ಸಿ.ಎಂ.ದರಬಾರೆ ಸ್ವಾಗತಿಸಿದರು. ರಾಮಚಂದ್ರ ಕಾಕಡೆ ನಿರೂಪಿಸಿ, ವಂದಿಸಿದರು.
ಕೇಂದ್ರ ಸರಕಾರ ಯುದ್ಧ ವಿರಾಮಕ್ಕೆ ಒಪ್ಪಿದ್ದು ದುರಾದೃಷ್ಟಕರ.ಪಾಕಿಸ್ತಾನ ಎಂದು ಕುತಂತ್ರ ಬುದ್ಧಿ ಮತ್ತು ಉಗ್ರಗಾಮಿ ಚಟುವಟಿಕೆ ನಿಲ್ಲಿಸುವುದಿಲ್ಲ.: ಬಸವರಾಜ ಹೊರಟ್ಟಿ ಸಭಾಪತಿಗಳು.